ಭಾರತಿಯಾರ್, ಗೋಪಾಲಕೃಷ್ಣ

ಸು. 1786._? ಕರ್ಣಾಟಕ ಸಂಗೀತ ವಿದ್ವಾಂಸರು. ಹುಟ್ಟಿದ್ದು ತಂಜಾವೂರು ಜಿಲ್ಲೆಯ ನಾಗಪಟ್ಟಣಕ್ಕೆ ಸಮೀಪ ವಿರುವ ನರಿಮಣಂ ಎಂಬ ಊರಲ್ಲಿ. ತಂದೆ ರಾಮಸ್ವಾಮಿ ಭಾರತಿಯಾರ್. ಶೈವಧರ್ಮ ಸಂಪ್ರದಾಯಸ್ಥರು. ಇವರನ್ನು ಮುಡಿಕೊಂಡಾನ್ ಭಾರತಿಯಾರ್ ಎಂದೂ ಆನತಾಂಡವಪುರ ಭಾರತೀಯರ್ ಎಂದೂ ಕರೆಯುತ್ತಾರೆ. ಬಾಲ್ಯದಲ್ಲಿ ಇವರು ಸಂಸ್ಕøತವನ್ನು ಚೆನ್ನಾಗಿ ಅಭ್ಯಾಸ ಮಾಡಿದರು. ತಮಿಳನ್ನು ಹೆಚ್ಚಾಗಿ ಕಲಿಯಲಿಲ್ಲ. ಕರ್ನಾಟಕ ಸಂಗೀತ ಇವರ ಕುಲ ವಿದ್ಯೆ. ಮಾಯೂರದ ಗೊವಿಂದ ಶಿವ ಎಂಬವರಿಂದ ವೇದಾಂತ ಮತ್ತು ಯೋಗಶಾಸ್ತ್ರಗಳನ್ನು ಕಲಿತರು. ರಾಮ ದಾಸರಿಂದ ಹಿಂದುಸ್ಥಾನಿ ಸಂಗೀತವನ್ನು ಅಭ್ಯಸಿದರು. ಪಿಟೀಲು ಬಾರಿಸುವುದನ್ನೂ ಅರಿತಿದ್ದರು. ಇವರು ಬ್ರಹ್ಮಚಾರಿಯಾಗಿದ್ದುಕೊಂಡು ಭಿಕ್ಷೆ ಎತ್ತಿ ಜೀವನ ನಡೆಸಿದರು. ಬಾಲ್ಯದಿಂದಲೂ ಸಂಗೀತದಲ್ಲಿ ಆಸಕ್ತಿಯಿದ್ದ ಇವರು ಸ್ವತಃ ಕೀರ್ತನೆಗಳನ್ನು ರಚಿಸಿದರು. ತ್ಯಾಗರಾಜರ ಹತ್ತಿರ ತರಬೇತಿಹೊಂದಿ ಅವರಿಂದ ಹೊಗಳಿಸಿಕೊಂಡರು. ಅವರು ಬರೆದ ಪಂಚರತ್ನಮ್ ಗೀತೆಗಳನ್ನು ಇವರು ತಮಿಳಿನಲ್ಲಿ ಬರೆದು ಹಾಡಿದರು. ಪೆರಿಯಪುರಾಣದ ಕೆಲವು ಭಕ್ತರ ಜೀವನವನ್ನು ಆಯ್ದುಕೊಂಡು ಕೀರ್ತನೆಗಳನ್ನು ರಚಿಸಿದರು. ನಾಗಪಟ್ಟಣದ ಕಂದಪ್ಪ ಚಿಟ್ಟಿಯಾರ್ ಎಂಬವರ ಅಪೇಕ್ಷೆಯಂತೆ ನಂದನ್ ಚರಿತ್ತಿರ ಕೀರ್ತನೆ ಬರೆದು ಜನಪ್ರಿಯತೆ ಗಳಿಸಿದರಲ್ಲದೆ ತಮಿಳಿನ ಮಹಾ ವಿದ್ವಾನ್ ಮೀನಾಕ್ಷಿ ಸುಂದರಮ್ ಪಿಳ್ಳೆಯವರಿಂದ ಹೊಗಳಿಸಿಕೊಂಡರು. ಇಯರ್ಪಗೈನಾಯನಾರ್ ಚರಿತ್ತಿರಮ್. ತಿರುನೀಲ ಕಂಠನಾಯನಾರ್ ಚರಿತ್ತಿರಮ್ ಕಾರೈಕ್ಕಾಲಮ್ಮ್ಮೈಯಾರ್ ಚರಿತ್ತಿರಮ್ ಎಂಬವು ಇವರು ರಚಿಸಿದ ಇತರ ಕೀರ್ತನೆಗಳು. ಇವರ ಕೀರ್ತನೆಗಳು ಮುಂದಿನವರಿಗೆ ಮಾರ್ಗದರ್ಶನವಾದುವು. ಮದುವೆಯ ಸಂದರ್ಭದಲ್ಲಿ ಹಾಡುವ ನಲುಂಗು, ಊಂಚಲ್, ಲಾಲಿ, ಕುಮ್ಮಿ ಮೊದಲಾದ ಪ್ರಕಾರಗಳಲ್ಲಿ ಇವರು ಹಲವಾರು ಹಾಡುಗಳನ್ನು ರಚಿಸಿದ್ದಾರೆ.

	ಶಿವಭಕ್ತರಾದ ಇವರು ನಿವೃತ್ತಿ ಮಾರ್ಗದಲ್ಲಿ ಆಸಕ್ತಿಯನ್ನೂ ಕರ್ನಾಟಕ ಸಂಗೀತದಲ್ಲಿ ಅಭಿರುಚಿಯನ್ನೂ ಹೊಂದಿದ್ದರು.
(ಎಸ್.ಕೆ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ